-ಪ್ರಸನ್ನ ಯು. ಸನ್ನದು ಆರ್ಥಿಕ ಗುರಿ ಯೋಜಕರು ಹಾಗೂ ಕುಡಿಯುವ ನೀರಿನ ವಿಶೇಷಜ್ಞರು, ದಾವಣಗೆರೆ
ನಾವು ಪ್ರತೀ ತಿಂಗಳು ಸಂಬಳದ ರೂಪದಲ್ಲಿ ಗಳಿಸುವ ಹಣ ಹತ್ತುಹಲವು ಕಾರಣಗಳಿಗಾಗಿ ಖರ್ಚಾಗುವುದೆಂದು ಎಲ್ಲರಿಗೂ ಗೊತ್ತು. ಆದರೆ ಬಹಳಷ್ಟು ಜನ ತಿಂಗಳ ಕೊನೆಗೆ ತಾವು ಖರ್ಚು ಮಾಡಿದ ಹಣವನ್ನು ಅವಲೋಕಿಸುವ (Analysis) ಅಥವಾ ಲೆಕ್ಕಾಚಾರ (Calculation) ಹಾಕುವ ಪರಿಪಾಠವನ್ನು ಇಟ್ಟುಕೊಂಡಿದ್ದಾರೆ. ಅವರು ಹಾಗೆ ಮಾಡುವಾಗ “ಇಂತಹ ಕಾರಣಕ್ಕೆ ಸುಮ್ಮನೆ ಹಣ ಖರ್ಚಾಯಿತು”, “ನಾನು ಇಂತಹ ಕಮಿಟ್ಮೆಂಟ್ ಮಾಡಿಕೊಳ್ಳಬಾರದಾಗಿತ್ತು”, “ಸಾಲದ ಇಎಂಐ (EMI) ಯಾವಾಗ ಮುಗಿಯುತ್ತದೋ ಏನೋ”, “ಇದರ ಖರ್ಚು ಜಾಸ್ತಿಯಾಯ್ತು”, “ಅದರ ಖರ್ಚು ಜಾಸ್ತಿಯಾಯ್ತು” ಎಂದು ಅನುರುಣಿಸುತ್ತಿರುತ್ತಾರೆ. ಆದರೆ ಅಂತಹ ಖರ್ಚುಗಳನ್ನು ತಾನೇಕೆ ಮೈಮೇಲೆ ಎಳೆದುಕೊಂಡೆ ಎಂದು ಅಲ್ಲಿಯವರೆಗೂ ಚಿಂತೆ ಮಾಡಿಯೇ ಇರುವುದಿಲ್ಲ. ಅದೇನೇ ಇರಲಿ ಈ ಖರ್ಚುಗಳು ಎನ್ನುವುದು ನಿರಂತರವಾದುವು. ಒಂದು ಮುಗಿದ ಮೇಲೆ ಮತ್ತೊಂದು ಖರ್ಚು ಆರಂಭವಾಗುತ್ತದೆ. ಒಂದು ಸಾಲ ತೀರಿಸಿದ ತಕ್ಷಣ ಇನ್ನೊಂದು ಸಾಲ ಮಾಡುವ ಹುಮ್ಮಸ್ಸು ಬಂದುಬಿಡುತ್ತದೆ. ಒಂದು ವಸ್ತುವಿನ ಇಎಂಐ ಮುಗಿದ ತಕ್ಷಣ ಮತ್ತೊಂದರ ಖರೀದಿಗೆ ಯೋಚನೆ. ಮನೆಯ ಸಾಲ ತೀರಿಸಿದ ತಕ್ಷಣ ಮನೆಯ ಮೇಲೆ ಮನೆ ಕಟ್ಟುವ ಧಾವಂತ. ಹೀಗೆ ನಾವು ಖರ್ಚುಗಳನ್ನು ತಡೆಹಿಡಿದುಕೊಳ್ಳುವ ಆಲೋಚನೆಯನ್ನು ಮಾತ್ರ ಯಾವತ್ತೂ ಮಾಡೋದಿಲ್ಲ.
ಯಾಕಿಷ್ಟು ಖರ್ಚುಗಳ ಬಗ್ಗೆ ಸವಿಸ್ತಾರವಾಗಿ ಹೇಳುತ್ತಿದ್ದೇನೆ ಎಂದರೆ ಈ ಖರ್ಚುಗಳ ಅಳ ಅಗಲಗಳ ಬಗ್ಗೆ ನಮಗೆ ಕಲ್ಪನೆಯೇ ಇಲ್ಲ. ಇವು ಎಂತಹ ಖರ್ಚುಗಳೆಂಬುದೂ ಸಹ ನಮಗೆ ಗೊತ್ತಿಲ್ಲ. ಸ್ವಲ್ಪ ಇದನ್ನು ಹೆಚ್ಚು ವಿಶ್ಲೇಷಿಸುವುದಾದರೆ ಈ ಖರ್ಚುಗಳಲ್ಲಿ ಎರಡು ವಿಧಗಳಿವೆ –
ಒಂದು “ಇಂದಿನ ಖರ್ಚುಗಳು” (Present Expenses) ಮತ್ತೊಂದು “ಭವಿಷ್ಯದ ಖರ್ಚುಗಳು” (Future Expenses). ಇಂದಿನ ಖರ್ಚುಗಳನ್ನು ನಾವು ತಡೆಹಿಡಿಯಲು ಸಾಧ್ಯವೇ ಇಲ್ಲ ಮತ್ತು ಅದರ ಪರಿಣಾಮಗಳ ಬಗ್ಗೆ ಈಗಾಗಲೇ ತಿಳಿಸಿಕೊಡಲಾಗಿದೆ. ಎರಡನೆಯ ಬಗೆಯಾದ ಭವಿಷ್ಯದ ಖರ್ಚುಗಳು – ಇವು ನಮಗೆ ಕಲ್ಪನೆಗೆ ಸಿಗದಿರುವ ಅಥವಾ ಕಲ್ಪನೆಗೂ ನಿಲುಕದಿರುವ ಖರ್ಚುಗಳು. ಇಂತಹ ಖರ್ಚುಗಳ ಬಗ್ಗೆ ಎಚ್ಚರ ವಹಿಸಲು ಒಬ್ಬ ಆರ್ಥಿಕ ಸಲಹೆಗಾರನನ್ನು (Financial Advisor) ಜೊತೆಗಿಟ್ಟುಕೊಳ್ಳುವುದು ಒಳಿತು. ಆರ್ಥಿಕ ಸಲಹೆಗಾರರ ಪಾತ್ರ ಏನೆಂದು ಪ್ರತ್ಯೇಕವಾಗಿ ವಿವರಿಸುತ್ತೇನೆ.
ಒಬ್ಬ ವ್ಯಕ್ತಿಯ ಜೀವನದ ಹಂತದ (Life Stage) ಆಧಾರದಲ್ಲಿ ಭವಿಷ್ಯತ್ತಿನ ಖರ್ಚುಗಳು ನಿರ್ಧರಿತವಾಗುತ್ತವೆ. ಅವುಗಳನ್ನು ಕೆಳಗಿನಂತೆ ವಿಸ್ತಾರವಾಗಿ ತಿಳಿಸಿಕೊಡುತ್ತೇನೆ :
1. ಓದು ಮುಗಿದು ಹೊಸದಾಗಿ ಕೆಲಸಕ್ಕೆ ಸೇರಿದಾಗ :
ಓದು ಮುಗಿದು ಹೊಸದಾಗಿ ಕೆಲಸಕ್ಕೆ ಸೇರಿದಾಗ ಎಲ್ಲರ ವಯಸ್ಸು ಸುಮಾರು 21 ರಿಂದ 24 ವರ್ಷ ವಯಸ್ಸಿನವರಾಗಿರುತ್ತಾರೆ. ಈ ಹಂತದಲ್ಲಿ ನಮ್ಮ ಪ್ರಸ್ತುತ ಖರ್ಚುಗಳು ತೀರಾ ದುಬಾರಿಯೇನೂ ಆಗಿರುವುದಿಲ್ಲ. ಈ ವಯಸ್ಸಿನವರು ಸಾಮಾನ್ಯವಾಗಿ ಅವಿವಾಹಿತರಾಗಿರುವುದರಿಂದ ಅವರು ಗಳಿಸುವ ಆದಾಯದ ಬಹುಭಾಗ ಹಣ ಖರ್ಚಾಗುವುದೇ ಇಲ್ಲ. ಆದರೆ ಇಂದಿನ ಜೀವನಶೈಲಿಗೆ (Lifestyle) ಮನಸೋಲುವ ಬಹಳಷ್ಟು ಜನ ಈ ವಯಸ್ಸಿನ ಯುವಕಯುವತಿಯರು ಅರ್ಥವಿಲ್ಲದ ಹತ್ತುಹಲವು ಕಾರಣಗಳಿಗಾಗಿ ಹಣವನ್ನು ಖರ್ಚು ಮಾಡುತ್ತಾ ಹೋಗುತ್ತಾರೆ. ಅವುಗಳೆಂದರೆ ಬ್ರಾಂಡೆಡ್ (Branded) ಉಡುಗೆತೊಡುಗೆಗಳು, ಬ್ರಾಂಡೆಡ್ ವಾಚ್, ಕ್ರೆಡಿಟ್ ಕಾರ್ಡ್, ದುಬಾರಿ ಮೊಬೈಲ್, ದುಬಾರಿ ಬೆಲೆಯ ಸ್ಕೂಟರ್ ಅಥವಾ ಬೈಕ್, ಪ್ರವಾಸಗಳು, ಸಿನೆಮಾ, ಹೋಟೆಲ್, ಔಟಿಂಗ್,… ಹೀಗೆ ತರಹೇವಾರಿ ಖರ್ಚುಗಳು. ಈ ವಯಸ್ಸಿನ ಅನೇಕರಿಗೆ ಮುಂದಿನ ಜೀವನದ ಬಗ್ಗೆ ಕಲ್ಪನೆಯೂ ಇರುವುದಿಲ್ಲ ಅಥವಾ ಅದರ ಅನುಭವವೂ ಇರುವುದಿಲ್ಲ ಅಥವಾ ಇಂತದ್ದರ ಬಗ್ಗೆ ಯಾವ ಶಾಲೆಯಲ್ಲೂ ಹೇಳಿಕೊಟ್ಟಿರುವುದಿಲ್ಲ. ಆದ್ದರಿಂದ ಬೇಡವಾದ ಅವೈಜ್ಞಾನಿಕ ಖರ್ಚುಗಳ ಪಟ್ಟಿ ದೊಡ್ಡದಿರುತ್ತದೆ ಇವರದ್ದು. ಆದರೆ ಈ ವಯಸ್ಸಿನವರು ತಮ್ಮ ಪ್ರಸ್ತುತ ಖರ್ಚುಗಳ ಮೇಲೆ ತಮಗೆ ತಾವೇ ಮಿತಿ ಹೇರಿಕೊಳ್ಳಬೇಕು (Self-control). ಏಕಂದರೆ ಮುಂದಿನ 3-5 ವರ್ಷಗಳ ಅವಧಿಯಲ್ಲಿ ಅವರು ವೈವಾಹಿಕ ಜೀವನಕ್ಕೆ ಕಾಲಿಡುವುದರಿಂದ ಮುಂದಿನ ಜೀವನದ ಬಗ್ಗೆ ಉತ್ತಮ ಲೆಕ್ಕಾಚಾರಗಳನ್ನು ಹಾಕಿಕೊಳ್ಳುವುದು ಒಳಿತು. ಮದುವೆಯಾಗಿ ಹೆಂಡತಿ ಜೊತೆಗೆ ಬಂದಾಕ್ಷಣ ಇದ್ದಕ್ಕಿದ್ದ ಹಾಗೆ ಖರ್ಚುಗಳು ದುಪ್ಪಟ್ಟಾಗುವವು. ಅದೆಲ್ಲದಕ್ಕೂ ಹಣವನ್ನು ವ್ಯವಸ್ಥಿತವಾಗಿ ಉಳಿಸುತ್ತಾ ಅಥವಾ ವಿನಿಯೋಜನೆ ಮಾಡುತ್ತಾ ಹೋಗಬೇಕು.
2. ನವವಿವಾಹಿತ ಗಂಡ-ಹೆಂಡತಿ :
ವಿವಾಹಿತ ಗಂಡ-ಹೆಂಡತಿಯ ಮಾಸಿಕ ಖರ್ಚುಗಳು ಏನಿರಬಹುದೆಂದು ನಿಮಗೆ ಈಗಾಗಲೇ ತಿಳಿಸಿಕೊಡಲಾಗಿದೆ. ಅದನ್ನು ಮತ್ತೊಮ್ಮೆ ವಿವರಿಸುವ ಬದಲು ನೇರವಾಗಿ ಅವರ ಭವಿಷ್ಯದ ಖರ್ಚುಗಳ ಬಗ್ಗೆ ತಿಳಿದುಕೊಳ್ಳೋಣ. ಅಂತಹ ಭವಿಷ್ಯದ ಖರ್ಚುಗಳು ಯಾವುವೆಂದರೆ ಅವರಿಗೆ ಹುಟ್ಟುವ ಮಕ್ಕಳ ವಿದ್ಯಾಭ್ಯಾಸದ ಖರ್ಚುಗಳು, ಆ ಮಕ್ಕಳ ಮದುವೆ ಖರ್ಚುಗಳು, ತಮ್ಮ ಇಳಿವಯಸ್ಸಿನಲ್ಲಿ ಭರಿಸಬೇಕಾದ ಖರ್ಚುಗಳು, ಸ್ವಂತ ಮನೆ ಕಟ್ಟಿಸಿಕೊಳ್ಳಲು ಹಣ ಎತ್ತಿಡುವುದು, ಸ್ವಂತ ಕಾರು ಕೊಳ್ಳಲು, ಗಂಡಹೆಂಡತಿ ಇಬ್ಬರೂ ವಿದೇಶ ಪ್ರವಾಸ ಮಾಡಲು, ಹೀಗೆ ಕೆಲವು ಭವಿಷ್ಯದ ಖರ್ಚುಗಳ ಬಗ್ಗೆ ನವವಿವಾಹಿತ ಗಂಡ ಹೆಂಡತಿ ತಲೆಕೆಡಿಸಿಕೊಳ್ಳುವುದು ಒಳ್ಳೆಯದು.
3. ಗಂಡ ಹೆಂಡತಿ ಮತ್ತು ಮಕ್ಕಳಿರುವ ತುಂಬು ಸಂಸಾರ :
ಈ ಹಂತದಲ್ಲಿರುವವರು ಮಕ್ಕಳ ಮುಂದಿನ ವಿದ್ಯಾಭ್ಯಾಸದ ಖರ್ಚುಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಇದಲ್ಲದೆ ಆ ಮಕ್ಕಳ ಮದುವೆ ಖರ್ಚುಗಳು, ತಮ್ಮ ಇಳಿವಯಸ್ಸಿನಲ್ಲಿ ಭರಿಸಬೇಕಾದ ಖರ್ಚುಗಳು, ಸ್ವಂತ ಮನೆ ಕಟ್ಟಿಸಿಕೊಳ್ಳಲು ಹಣ ಎತ್ತಿಡುವುದು, ಸ್ವಂತ ಕಾರು ಕೊಳ್ಳಲು, ಗಂಡಹೆಂಡತಿ ಇಬ್ಬರೂ ವಿದೇಶ ಪ್ರವಾಸ ಮಾಡಲು,… ಹೀಗೆ ಭವಿಷ್ಯದ ಖರ್ಚುಗಳ ಬಗ್ಗೆ ಮಕ್ಕಳಿರುವ ಗಂಡ ಹೆಂಡತಿ ತಲೆಕೆಡಿಸಿಕೊಳ್ಳುವುದು ಒಳ್ಳೆಯದು.
4. ಮಧ್ಯವಯಸ್ಕ ಗಂಡಹೆಂಡತಿ :
ಅಂದರೆ 50-55 ವರ್ಷ ವಯೋಮಾನದ ಗಂಡ ಹೆಂಡತಿಯರು ಈ ಹಂತದಲ್ಲಿ ತಮ್ಮ ಮಕ್ಕಳ ವಿದ್ಯಾಭ್ಯಾಸವು ಮುಗಿದು ಮಕ್ಕಳ ಮದುವೆಯನ್ನು ಪೂರ್ಣಗೊಳಿಸಿರುತ್ತಾರೆ ಅಥವಾ ಮಕ್ಕಳನ್ನು ಮದುವೆ ಮಾಡುವ ಹಂತವನ್ನು ತಲುಪಿರುತ್ತಾರೆ. ಇಂತಹ ಹಂತದಲ್ಲಿ ಅವರುಗಳಿಗೆ ಭವಿಷ್ಯತ್ತಿನಲ್ಲಿ ಯಾವ ಗಂಭೀರವಾದ ಖರ್ಚುಗಳು ಅಥವಾ ಜವಾಬ್ದಾರಿಗಳು ಇಲ್ಲದ ಕಾರಣ ಅವರುಗಳು ತಮ್ಮ ಇಳಿವಯಸ್ಸಿನ ಖರ್ಚುಗಳ ಬಗ್ಗೆ ಹೆಚ್ಚೆಚ್ಚು ಗಮನಹರಿಸಬೇಕು. ವಯಸ್ಸಾದಾಗ ತಾವು ಎದುರಿಸಬೇಕಾದ ಅನಾರೋಗ್ಯದ ಬಗ್ಗೆಯೂ ಮತ್ತು ಅದರಿಂದ ತಗುಲುವ ಖರ್ಚುಗಳ ಬಗ್ಗೆಯೂ ತಲೆಕೆಡಿಸಿಕೊಳ್ಳಬೇಕು. ಜೊತೆಜೊತೆಗೆ ತಮ್ಮ ನಿವೃತ್ತಿಗೆ ಕೆಲವೇ ವರ್ಷಗಳ ಸಮಯ ಇರುವುದರಿಂದ ಯಾವ ಹೊಸ ಸಾಲಗಳನ್ನು ಮಾಡಿಕೊಳ್ಳಬಾರದು.
5. ನಿವೃತ್ತರಾದವರು :
60 ವರ್ಷ ವಯೋಮಾನವನ್ನು ಇವರುಗಳು ಈಗಾಗಲೇ ದಾಟಿರುವುದರಿಂದ ಆವರಿಗೆ ಯಾವ ಆದಾಯವು ಇರುವುದಿಲ್ಲ. ಅವರ ಜೀವನದ ಮಹತ್ತರ ಜವಾಬ್ದಾರಿಗಳನ್ನು ಈಗಾಗಲೇ ಮುಗಿಸಿರುವುದರಿಂದ ತಮ್ಮ ಇಳಿವಯಸ್ಸಿನ ಖರ್ಚುಗಳಿಗಾಗಿ ಕೂಡಿಸಿಟ್ಟುಕೊಂಡಿದ್ದ ಆಪಧನವನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳಬೇಕು. ಅವರ ಭವಿಷ್ಯದ ಖರ್ಚುಗಳು ಏನಿದ್ದರೂ ಕೇವಲ ಅವರ ಅವಶ್ಯಕತೆಗಳನ್ನು ಯಾವ ಕೊರತೆಯೂ ಇಲ್ಲದೆ ಪೂರೈಸಿಕೊಳ್ಳುವುದು ಮತ್ತು ಅನಾರೋಗ್ಯ ಎದುರಾದಾಗ ಅಂತಹ ಖರ್ಚುಗಳನ್ನು ನಿಭಾಯಿಸುವುದು. ಈ ವಯೋಮಾನದವರು ಯಾವುದೇ ರೀತಿಯಿಂದಲೂ ಸಾಲಗಳನ್ನು ಮಾಡಬಾರದು.
ಹೀಗೆ ಜೀವನದ ವಿವಿಧ ಹಂತಗಳಲ್ಲಿ ವಿವಿಧ ರೀತಿಯ ಭವಿಷ್ಯದ ಖರ್ಚುಗಳು ಇದ್ದೇ ಇರುತ್ತವೆ. ನನಗೆ ಖರ್ಚುಗಳೇ ಇಲ್ಲ ಎಂದು ಹೇಳುವುದು ಮೂರ್ಖತನದ ಪರಮಾವಧಿಯಾದೀತು. ಹೊಸದಾಗಿ ಕೆಲಸಕ್ಕೆ ಸೇರಿದಾಗ ಭವಿಷ್ಯತ್ತಿನ ಖರ್ಚುಗಳ ಕಡೆ ಹೆಚ್ಚೆಚ್ಚು ಗಮನ ಹರಿಸಿದರೆ ವಯಸ್ಸಾದ ಇಳಿವಯಸ್ಸಿನ ದಿನಗಳನ್ನು ನಿಶ್ಚಿಂತೆಯಿಂದ ಕಳೆಯಬಹುದು. ಅದರ ಬದಲು ಪ್ರಸ್ತುತ ಖರ್ಚುಗಳ ಬಗ್ಗೆ ತಲೆಕೆಡಿಸಿಕೊಂಡು ಆಡಂಬರದ ಜೀವನ ನಡೆಸಲು ಹೋದರೆ ಭವಿಷ್ಯಕ್ಕಾಗಿ ಉಳಿಸಲು ಏನೂ ಇರುವುದಿಲ್ಲ.
ಇಳಿವಯಸ್ಸಿನಲ್ಲಿ ಆರ್ಥಿಕವಾಗಿ ಸ್ವಾತಂತ್ರ (Financial Freedom) ಅನುಭವಿಸುವುದರ ಬದಲು ಒಂದಷ್ಟು ದಿನ ಮಗನ ಮನೆಯಲ್ಲಿ ಮತ್ತೊಂದಷ್ಟು ದಿನ ಮಗಳ ಮನೆಯಲ್ಲಿ ಕಾಲದೂಡಬೇಕಾಗುವುದು. ಆ ಕಾಲದಲ್ಲಿ ಮಕ್ಕಳೇನಾದರೂ ಆಡಂಬರದ ಜೀವನಕ್ಕೆ ಮೊರೆಹೋಗಿದ್ದರೆ ಅವರ ಮನೆಯಲ್ಲಿ ಗುಲಾಮರಂತೆ ಬಾಳಬೇಕಾದೀತು.
ದಿನದಿಂದ ದಿನಕ್ಕೆ ಭಾವನೆಗಳು ಸತ್ತುಹೋಗುತ್ತಿರುವ ಈ ಕಾಲಮಾನದಲ್ಲಿ ಎಂತವರಿಗೂ ಗುಲಾಮಗಿರಿಯ ಜೀವನ ಇಷ್ಟ ಆಗೋದಿಲ್ಲ. ಎಲ್ಲರೂ ಸ್ವಾಭಿಮಾನದಿಂದ ಬದುಕುವ ಕನಸು ಹೊಂದಿರುತ್ತಾರೆ. ಅಂತಹ ಸ್ವಾಭಿಮಾನದ ಸ್ವತಂತ್ರ ಜೀವನ ಬೇಕೆಂದರೆ ಪ್ರಸ್ತುತ ಖರ್ಚುಗಳ ಮೇಲೆ ಹಿಡಿತ ಸಾಧಿಸಬೇಕು ಮತ್ತು ಭವಿಷ್ಯದ ಖರ್ಚುಗಳ ಬಗ್ಗೆ ಗಂಭೀರ ಚಿಂತನೆ ಇಟ್ಟುಕೊಳ್ಳಬೇಕು.
ಭವಿಷ್ಯದ ಖರ್ಚುಗಳನ್ನು ನಿಭಾಯಿಸಲು ಹಣವನ್ನು ಎಲ್ಲೆಲ್ಲಿ ಉಳಿತಾಯ ಮಾಡಬೇಕು ಅಥವಾ ವಿನಿಯೋಜನೆ ಮಾಡಬೇಕು ಎಂಬುದೇ ಪ್ರಶ್ನೆ ಅಲ್ಲವೇ? ಅದಕ್ಕೂ ಸುಲಭ ಉತ್ತರಗಳಿವೆ. ತಿಳಿಸಿಕೊಡುತ್ತೇನೆ. ಆದರೆ ಇಂದಿನಿಂದಲೇ ಭವಿಷ್ಯದ ಖರ್ಚುಗಳ ಬಗ್ಗೆ ತಲೆಕೆಡಿಸಿಕೊಳ್ಳಿ.