Connect with us

Dvgsuddi Kannada | online news portal | Kannada news online

ಹಾಸಿಗೆ ಇದ್ದಷ್ಟು ಕಾಲು ಚಾಚಿದರೆ ಮುಂದೆ ಕೈಚಾಚುವುದು ತಪ್ಪುತ್ತದೆ..!

Home

ಹಾಸಿಗೆ ಇದ್ದಷ್ಟು ಕಾಲು ಚಾಚಿದರೆ ಮುಂದೆ ಕೈಚಾಚುವುದು ತಪ್ಪುತ್ತದೆ..!

-ಪ್ರಸನ್ನ ಯು, ಸನ್ನದು ಆರ್ಥಿಕ ಗುರಿ ಯೋಜಕರು,ದಾವಣಗೆರೆ

ನಾಗರೀಕತೆಗಳ ಬೆಳವಣಿಗೆ ಆಗುತ್ತಿದ್ದಂತೆ ಈ ವಿಶ್ವದಲ್ಲಿ ನಾಗರೀಕ ಸಮಾಜಗಳು ಮತ್ತು ಸಮುದಾಯಗಳು ಉದಯಿಸುತ್ತಾ ಹೋದವು. ಜನರು ತಮಗೆ ಅನುಕೂಲವೆನ್ನಿಸುವ ಪ್ತದೇಶಗಳಲ್ಲಿ ತಮ್ಮ ಜೀವನ ಕಟ್ಟಿಕೊಳ್ಲಲು ಆರಂಭಿಸಿದರು. ಮುಂದೆ ಇದೇ ವಸತಿ ಪ್ರದೇಶಗಳು ಗಾತ್ರಾನುಸಾರ ಹಳ್ಳಿಗಳು, ಪುರಗಳು, ನಗರಗಳು, ಪಟ್ಟಣಗಳು ಮತ್ತು ಮಹಾನಗರಗಳೆಂದು ಕರೆಯಿಸಿಕೊಳ್ಳಲು ಆರಂಭಿಸಿದವು. ಇದರೊಂದಿಗೆ ಜನಸಂಖ್ಯೆಯೂ ಬೆಳೆಯುತ್ತಾ ಹೋಯಿತು. ಭಾಷೆಗಳೂ ಬೆಳೆದವು. ಸಂಸ್ಕೃತಿಗಳು, ಸಂಪ್ರದಾಯಗಳು, ಆಚಾರ, ವಿಚಾರ, ಕಲೆ, ಸಾಹಿತ್ಯ ಏನೆಲ್ಲಾ ಹುಟ್ಟುತ್ತಾ ಹೋದವು. ಇದರೊಂದಿಗೆ ಬೇಡಿಕೆ ಪೂರೈಕೆಗಳ ಆಧಾರದ ಮೇಲೆ ವ್ಯಾಪಾರ ವಹಿವಾಟುಗಳು ಆರಂಭಗೊಂಡವು.

ಸಂಶೋಧನೆಗಳು, ವಿಜ್ಞಾನ, ತಂತ್ರಜ್ಞಾನ ಬೆಳೆಯುತ್ತಾ ಹೋಯಿತು. ಹೊಸ ಹೊಸ ಅವಿಷ್ಕಾರಗಳಾದವು. ಮನುಷ್ಯನ ಜೀವನಕ್ಕೆ ಅವಶ್ಯಕವೆನ್ನಿಸುವ ವಸ್ತುಗಳ ಉತ್ಪಾದನೆ ಆರಂಭಗೊಂಡಿತು. ಕೈಗಾರಿಕೆಗಳು ಜನ್ಮತಾಳಿದವು. ಉತ್ಪಾದಿಸಿದ ವಸ್ತುಗಳನ್ನು ಕೊಂಡು ಮಾರಾಟ ಮಾಡುವ ಜಾಲಗಳು ಹುಟ್ಟಿಕೊಂಡವು. ಈ ರೀತಿ ಎಲ್ಲಾ ಕಡೆಯಲ್ಲೂ ಚಟುವಟಿಕೆಗಳು ಆರಂಭವಾಗುತ್ತಿದ್ದಂತೆ ಎರಡು ಮುಖ್ಯ ವರ್ಗಗಳು ಉದಯಿಸಿದವು. ಒಂದು ದುಡಿಸಿಕೊಳ್ಳುವ ವರ್ಗವಾದರೆ ಮತ್ತೊಂದು ಶ್ರಮಿಕ ಅಥವಾ ದುಡಿಯುವ ವರ್ಗ. ದುಡಿಸಿಕೊಳ್ಳುವ ಜನರನ್ನು ಬಂಡವಾಳಶಾಹಿಗಳೆಂದು ಕರೆದರು. ದುಡಿಯುವ ಅಥವಾ ಶ್ರಮಿಕ ವರ್ಗದ ಜನರನ್ನು ನೌಕರರೆಂದು ಕರೆದರು.

ಬಂಡವಾಳ ಹಾಕುವವನಿಗೆ ತನಗೆಷ್ಟು ಲಾಭ ಬರುತ್ತದೆ ಎಂದು ಚಿಂತೆಯಾದರೆ ಶ್ರಮಿಕನಿಗೆ ತಿಂಗಳಾಗುತ್ತಿದ್ದಂತೆ ತನಗೆಷ್ಟು ಸಂಬಳ ಸಿಗುತ್ತದೆಂದು ಚಿಂತೆ. ಹೀಗೆ ಒಟ್ಟಾರೆ ಎಲ್ಲರೂ ಈ ಹಣವನ್ನು ಗಳಿಸುವತ್ತ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿದ್ದಾರೆ. ಒಟ್ಟಾರೆ ಲಾಭದ ರೂಪದಲ್ಲೋ ಅಥವಾ ಸಂಬಳದ ರೂಪದಲ್ಲೋ ಬಂದು ಕೈಸೇರುವ ಹಣವನ್ನು ನಾವು ಏನು ಮಾಡುತ್ತಿದ್ದೇವೆ? ಈ ಪ್ರಶ್ನೆ ಸುಲಭವಾಗಿರುವುದರಿಂದ ಎಲ್ಲರು ಹೇಳುವ ಉತ್ತರ ನಮ್ಮ ಖರ್ಚು ವ್ಯಚ್ಚಗಳನ್ನು (Expenses) ನೋಡಿಕೊಳ್ಳಲು ಎಂದು. ಇದು ನಿಜಕ್ಕೂ ಸರಿಯಾದ ಉತ್ತರವೇ. ಆದರೆ ನಮ್ಮ ಖರ್ಚುಗಳ ಬಗ್ಗೆ ನಮಗೇನಾದರೂ ಸರಿಯಾದ ಕಲ್ಪನೆ ಇದೆಯೇ ಎಂಬ ಪ್ರಶ್ನೆಗೆ ಸ್ವಲ್ಪ ಗೊಂದಲ ಕಾಡಬಹುದು. ಹೌದು. ಈ ಪ್ರಶ್ನೆ ಗೊಂದಲಮಯವೇ. ಏಕೆಂದರೆ ನಾವು ಕಷ್ಟಪಟ್ಟು ದುಡಿದ ಹಣವನ್ನು ಯಾವ ಪ್ರಮಾಣದಲ್ಲಿ ಖರ್ಚು ಮಾಡುತ್ತಿದ್ದೇವೆ ಎಂಬ ಲೆಕ್ಕಾಚಾರ ನಮಗಿಲ್ಲ. ನಾವು ಖರ್ಚು ಮಾಡುತ್ತಿರುವ ಹಣ ಎಷ್ಟರ ಮಟ್ಟಿಗೆ ಸರಿ ಇದೇ ಎಂಬುದೂ ಸಹ ಗೊತ್ತಿಲ್ಲ. ಆದ್ದರಿಂದ ಮೊದಲು ನಾವು ಖರ್ಚು ಮಾಡುವ ಹಣದ ಬಗ್ಗೆ ಒಂದು ಕಲ್ಪನೆ ನಮಗಿರಲಿ.

ಖರ್ಚುಗಳನ್ನು ನಾವು “ಅವಶ್ಯಕತೆಗಳು (Needs)” ಮತ್ತು “ಬೇಡಿಕೆಗಳು (Wants)” ಎಂದು ಎರಡು ವಿಧವಾಗಿ ವಿಂಗಡಿಸಲಾಗುತ್ತದೆ. ಮೊದಲು ನಾವು ಅರ್ಥಮಾಡಿಕೊಳ್ಳಬೇಕಾದ ವಿಷಯವೆಂದರೆ – ಅವಶ್ಯಕತೆಗಳು ಮತ್ತು ಬೇಡಿಕೆಗಳು ಒಂದೇ ಅಲ್ಲ. ಅಂದಮೇಲೆ ಅವಶ್ಯಕತೆ ಎಂದರೇನು ? ಬೇಡಿಕೆ ಎಂದರೇನು ?

ಯಾವ ಖರ್ಚುಗಳನ್ನು ನಾವು ತಡೆಹಿಡಿಯುವುದರಿಂದ ನಮ್ಮ ಜೀವನದಲ್ಲಿ ವ್ಯತ್ಯಾಸ ಆಗಿಬಿಡುವುದೋ, ಅಂತಹ ಖರ್ಚುಗಳನ್ನು ನಾವು ಅವಶ್ಯಕತೆಗಳೆಂದು ಕರೆಯುತ್ತೇವೆ. ಉದಾಹರಣೆಗೆ : ಮನೆ ಬಾಡಿಗೆ, ವಿದ್ಯುತ್ ಬಿಲ್, ಟೆಲಿಪೋನ್ ಬಿಲ್, ಪೆಟ್ರೋಲ್, ಮಕ್ಕಳ ಟ್ಯೂಷನ್ ಫೀ, ಹಾಲು, ಹಣ್ಣು, ತರಕಾರಿ, ದಿನಸಿ, ಕೇಬಲ್ ಬಿಲ್, ಹೀಗೆ ಹತ್ತುಹಲವು ಉದಾಹರಣೆಗಳು ಸಿಗುತ್ತವೆ. ಇವುಗಳಲ್ಲಿ ಯಾವುದಾದರೂ ಒಂದನ್ನು ನಿಲ್ಲಿಸಿದರೆ ನಮ್ಮ ಜೀವನದಲ್ಲಿ ವ್ಯತ್ಯಾಸ ಆರಂಭವಾಗಿಬಿಡುತ್ತದೆ.

ಮನೆ ಮಾಲೀಕನಿಗೆ ತಿಂಗಳ ಬಾಡಿಗೆ ಕೊಡುವುದಿಲ್ಲ ಎಂದು ಹೇಳಿದರೆ ಮನೆ ಖಾಲಿಮಾಡಲು ಹೇಳಬಹುದು. ಆಗ ಜೀವನದಲ್ಲಿ ವ್ಯತ್ಯಾಸ ಕಾಣುತ್ತೇವೆ. ವಿದ್ಯುತ್ ಬಿಲ್ ಕಟ್ಟದಿದ್ದರೆ ನಮ್ಮ ಮನೆಯ ವಿದ್ಯುತ್ ಸಂಪರ್ಕ ಕಡಿತವಾಗುತ್ತದೆ. ಪೆಟ್ರೋಲ್ ಹಾಕಿಸಿಕೊಳ್ಳದಿದ್ದರೆ ನಮ್ಮ ವಾಹನ ಮುಂದೆ ಹೋಗುವುದಿಲ್ಲ. ಹಾಲನ್ನು ಸೇವಿಸದೇ ಹೋದರೆ ಅರೋಗ್ಯ ಬಾಧಿಸಬಹುದು. ದಿನಸಿ ತರಲಿಲ್ಲದಿದ್ದರೆ ಉಪವಾಸ ಮಲಗಬೇಕಾದೀತು. ಹೀಗೆ ಅವಶ್ಯಕತೆಗಳನ್ನು ನಾವು ತಡೆಹಿಡಿಯಲಾಗುವುದಿಲ್ಲ. ಅಂತಹ ಖರ್ಚುಗಳು ಅನಿವಾರ್ಯ. ಅವು ಬೇಕೇ ಬೇಕು ಅಷ್ಟೇ.

ಮತ್ತೊಂದು ಬೇಡಿಕೆ. ಈ ಬೇಡಿಕೆಗಳೆಂದರೆ ಯಾವ ಖರ್ಚುಗಳನ್ನು ನಾವು ತಡೆಹಿಡಿದರೂ ಅಥವಾ ಮುಂದೂಡಿದರೂ ಅವು ನಮ್ಮ ಜೀವನಕ್ಕೆ ಯಾವ ವ್ಯತ್ಯಾಸವನ್ನೂ ಮಾಡಲಾರವು. ಉದಾಹರಣೆಗೆ : ಸ್ವಂತ ಮನೆ ಕಟ್ಟಿಸಿಕೊಳ್ಳುವುದು, ಸ್ವಂತಕ್ಕೆ ಕಾರು ಖರೀದಿ, ವಿದೇಶ ಪ್ರಯಾಣ, ಬಂಗಾರ ಅಥವಾ ಬೆಲೆಬಾಳುವ ಆಭರಣಗಳನ್ನು ಕೊಳ್ಳುವುದು, ಸ್ವಂತ ಮನೆಯಿದ್ದರೂ ಮತ್ತೊಂದು ಮನೆ ಕಟ್ಟಿಸುವುದು, ಎರಡನೇ ಕಾರು ಖರೀದಿ, ದೊಡ್ಡ ಪರದೆಯ ಟಿವಿ ಖರೀದಿ, ದುಬಾರಿ ಮೊಬೈಲ್ ಖರೀದಿ, ದುಬಾರಿ ಬೆಲೆಯ ಬ್ರಾಂಡೆಡ್ ಉಡುಗೆತೊಡುಗೆಗಳ ಖರೀದಿ, ಇತ್ಯಾದಿ. ಇಂತಹ ಬೇಡಿಕೆಗಳನ್ನು ನಾವು ತಡೆಹಿಡಿಯಬಹುದು ಅಥವಾ ಮುಂದೂಡಬಹುದು. ಉದಾಹರಣೆಗೆ ಸ್ವಂತ ಮನೆ ಕಟ್ಟಿಸಿಕೊಳ್ಳಬೇಕೆಂಬ ನಿರ್ಧಾರವನ್ನು ನಾವು ಮುಂದೂಡಬಹುದು. ಮುಂದೂಡಿದರೆ ನಮ್ಮ ಜೀವನಕ್ಕೆ ಯಾವ ವ್ಯತ್ಯಾಸವೂ ಆಗುವುದಿಲ್ಲ. ಕಾರು ಕೊಳ್ಳುವ ಆಲೋಚನೆಯನ್ನು ಸ್ವಲ್ಪ ದಿನ ತಡೆಹಿಡಿಯಬಹುದು. ಬಂಗಾರ ಅಥವಾ ಆಭರಣ ಖರೀದಿಯನ್ನು ಮುಂದೂಡಬಹುದು. ವಿದೇಶ ಪ್ರಯಾಣವನ್ನೂ ಮುಂದೂಡಬಹುದು. ಇಂತಹ ಖರ್ಚುಗಳನ್ನು ನಾವು ತಡೆಹಿಡಿಯಬಹುದು ಅಥವಾ ಮುಂದೂಡಬಹುದು. ಇದರಿಂದ ನಮ್ಮ ಜೀವನಕ್ಕೆ ಯಾವ ವ್ಯತ್ಯಾಸವೂ ಆಗುವುದಿಲ್ಲ. ಇವುಗಳು ಜೀವನಕ್ಕೆ ಅನಿವಾರ್ಯವೂ ಅಲ್ಲ ಅವಶ್ಯಕವೂ ಅನ್ನಿಸುವುದಿಲ್ಲ. ಆದರೆ ಅವಶ್ಯಕತೆಗಳೆನ್ನೆಲ್ಲಾ ಪೂರೈಸಿಕೊಂಡಮೇಲೆ ಇಂತಹ ಬೇಡಿಕೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದು ಸೂಕ್ತ.

ಆದರೆ ಇಂದಿನ ದಿನಮಾನಗಳಲ್ಲಿ ಬೇಡಿಕೆಗಳ ಬಗ್ಗೆಯೇ ಹೆಚ್ಚೆಚ್ಚು ಒಲವು ತೋರಿಸುವ ಸಾಕಷ್ಟು ಜನರನ್ನು ಕಂಡಿದ್ದೇನೆ. ಬ್ಯಾಂಕುಗಳಲ್ಲಿ ಸುಲಭವಾಗಿ ಕಂತುಗಳ ಆಧಾರದಲ್ಲಿ ಸಿಗುವ ಸಾಲ ಯೋಜನೆಗಳ ಮೂಲಕ ತಮ್ಮ ಬೇಡಿಕೆಗಳನ್ನು ಪೂರೈಸಿಕೊಳ್ಳುವ ಬಹಳಷ್ಟು ಜನ ನಮ್ಮ ನಡುವೆ ಇದ್ದಾರೆ. ಇವರುಗಳಲ್ಲಿ ಎಷ್ಟು ಜನರಿಗೆ ತಮ್ಮ ದೀರ್ಘಕಾಲೀನ ಅವಶ್ಯಕತೆಗಳ ಅರಿವಿದೆ. ಕ್ಷಣ ಕ್ಷಣಕ್ಕೂ ಅನಿಶ್ಚಿತತೆಗಳ ನಡುವೆ ಬದುಕುತ್ತಿರುವ ನಮಗೆ ನೆನೆಸಿಕೊಂಡಾಕ್ಷಣ ಬೇಡಿಕೆಗಳನ್ನು ಪೂರೈಸಿಕೊಳ್ಳುವ ಧಾವಂತವೇಕೆ?

ಅವಶ್ಯಕತೆಗಳಿಗೆ ತಗುಲುವ ಹಣವನ್ನು ಮೊದಲು ದೀರ್ಘಾವಧಿಯವರೆಗೆ ಪೂರೈಸಿಕೊಂಡು ನಂತರ ಬೇಡಿಕೆಗಳ ಬಗ್ಗೆ ಗಮನಹರಿಸುವುದೇ ಜಾಣತನ. ಇದನ್ನು ತುಂಬಾ ಸುಲಭವಾಗಿ ವಿವರಿಸಲು ಇಲ್ಲೊಂದು ಉದಾಹರಣೆ ಇದೆ. ರೈತರು ತಾವು ಬೆಳೆದ ಬೆಳೆಯನ್ನೆಲ್ಲಾ ಕಟಾವು ಮಾಡಿ ಮಾರಾಟ ಮಾಡುವುದಕ್ಕೂ ಮೊದಲು ತನಗೆ ಮುಂದಿನ ಸುಗ್ಗಿಯವರೆಗೆ ಬೇಕಾಗುವಷ್ಟು ಕಾಳುಕಡಿಗಳನ್ನು ಎತ್ತಿಟ್ಟುಕೊಂಡು ಉಳಿದದ್ದನ್ನು ಮಾರಾಟ ಮಾಡುತ್ತಾರೆ. ಅಂದರೆ ತಮ್ಮ ದೈನಿಂದಿನ ಅವಶ್ಯಕತೆಗಳನ್ನು ಮೊದಲು ಪೂರೈಸಿಕೊಂಡು ನಂತರ ಉಳಿದದ್ದನ್ನು ಮಾರಾಟ ಮಾಡಿ ತಮ್ಮ ಬೇಡಿಕೆಗಳ ಕಡೆ ಗಮನ ಹರಿಸುತ್ತಾರೆ. ವರ್ಷಕ್ಕೊಮ್ಮೆ ದುಡ್ಡಿನ ಮುಖ ನೋಡುವ ರೈತರಿಗೇ ಇಷ್ಟೊಂದು ಶಿಸ್ತಿರಬೇಕಾದರೆ ಪ್ರತೀ ತಿಂಗಳು ಸಂಬಳ ತೆಗೆದುಕೊಳ್ಳುವ ನಮಗೇಕಿಲ್ಲ. ಈ ವಿಚಾರದಲ್ಲಿ ರೈತರ ಬದುಕು ಅನುಕರಣೀಯ. ರೈತರಂತೆ ಮೊದಲು ಅವಶ್ಯಕತೆಗಳ ಕಡೆ ಗಮನಹರಿಸೋಣ. ಬೇಡಿಕೆಗಳು ಆಮೇಲೆ. ಹಾಸಿಗೆ ಇದ್ದಷ್ಟು ಕಾಲು ಚಾಚಿದರೆ ಮುಂದೆ ಕೈಚಾಚುವುದು ತಪ್ಪುತ್ತದೆ..!!

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in Home

To Top