ದಾವಣಗೆರೆ; ವ್ಯಕ್ತಿಯ ಅಪಹರಣ ಮಾಡಿ 20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ 5 ಆರೋಪಿಗಳನ್ನು ಕೆಟಿಜೆ ನಗರ ಪೊಲೀಸರು ಬಂಧನ ಮಾಡಿದ್ದಾರೆ. ಪ್ರಕರಣ ದಾಖಲಾಗಿ 24 ಗಂಟೆಯೊಳಗೆ ಆರೋಪಿಗಳ ಪತ್ತೆ ಅಪಹರಣಕ್ಕೆ ಒಳಗಾಗಿದ್ದ ವ್ಯಕ್ತಿ ರಕ್ಷಣೆ ಮಾಡಿ, ಆರೋಪಿಗಳನ್ನು ಬಂಧಿಸಲಾಗಿದೆ.
ಜೂನ್ 1ರಂದು ಮಧ್ಯಾಹ್ನ ಶೇಖರಪ್ಪ ಗೋಡೌನ್ ಎದುರಿಗೆ ಅಂಬಿಕಾ ನಗರದಲ್ಲಿ ಲೊಕೇಶ್ (60) ಎಂಬುವವರನ್ನು ಯಾರೋ ದುಷ್ಕರ್ಮಿಗಳು ಅಪಹರಣ ಮಾಡಿ 20 ಲಕ್ಷ ರೂ ಗಳಿಗೆ ಬೇಡಿಕೆ ಇಟ್ಟಿರುವ ಬಗ್ಗೆ ಲೋಕೇಶ್ ಅವರ ಮಗ ನಾಗರಾಜ್ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತರುಗಳಾದ 01) ಸಾಗರ್, 23 ವರ್ಷ, ನಿಟುವಳ್ಳಿ, ದಾವಣಗೆರೆ, 02) ಯುವರಾಜ, 30 ವರ್ಷ, ನಂದಿಹಳ್ಳಿ ಗ್ರಾಮ, 03)ಸುಂದರ್ ನಾಯ್ಕ, 21 ವರ್ಷ, ನಂದಿಹಳ್ಳಿ ಗ್ರಾಮ, 04) ಚೇತನ್ ಕುಮಾರ, 27 ವರ್ಷ, ದಾವಣಗೆರೆ ಮತ್ತು ಓರ್ವ ಕಾನೂನು ಸಂಘರ್ಷಕ್ಕೆ ಒಳಗಾದ ವ್ಯಕ್ತಿಯನ್ನು ಸೇರಿದಂತೆ 05 ಜನರನ್ನು ಚನ್ನಗಿರಿ ತಾ. ಅಂತಪುರ ಗ್ರಾಮದ ಬಳಿ ಬಂಧಿಸಿ ತನಿಖೆ ಮುಂದುವರೆದಿರುತ್ತದೆ. ಅಪಹರಣಕ್ಕೊಳಗಾದ ಶ್ರೀ ಲೊಕೇಶ್ ರವರನ್ನು ರಕ್ಷಿಸಲಾಗಿರುತ್ತದೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಒಂದು ಕಾರು ಹಾಗೂ ಯಮಹಾ ಬೈಕ್ ವಶಪಡಿಸಿಕೊಳ್ಳಲಾಗಿದೆ.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ.ಬಸರಗಿ ಹಾಗೂ ದಾವಣಗೆರೆ ಗ್ರಾಮಾಂತರ ಸಹಾಯಕ ಪೊಲೀಸ್ ಅಧೀಕ್ಷಕಿ ಕನ್ನಿಕಾ ಸಿಕ್ರಿವಾಲ್, ನಗರ ಪೊಲೀಸ್ ಉಪಾಧಿಕ್ಷ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಪೊಲೀಸ್ ನಿರೀಕ್ಷಕ ಯು.ಜೆ.ಶಶಿಧರ್, ಸಂಚಾರ ವೃತ್ತ ನಿರೀಕ್ಷಕ ಅನಿಲ್, ಬಸವನಗರ ಪೊಲೀಸ್ ನಿರೀಕ್ಷಕ ಆರ್.ಆರ್.ಪಾಟೀಲ್, ಚನ್ನಗಿರಿ ಪೊಲೀಸ್ ನಿರೀಕ್ಷಕ ಮಧು, ಸಂತೇಬೆನ್ನುರು ಪೊಲೀಸ್ ನಿರೀಕ್ಷ ಮಹೇಶ್ ನೇತೃತ್ವದಲ್ಲಿ ಪಿಎಸ್ ಐ ಎಸ್.ಆರ್.ಕಾಟೇ ಹಾಗೂ
ಸಿಬ್ಬಂದಿಗಳ ತಂಡ ಪತ್ತೆ ಕಾರ್ಯ ಕೈಗೊಂಡಿದ್ದಾರೆ. ಈ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಅಧೀಕ್ಷಕ ಡಾ. ಅರುಣ್ ಕೆ. ಶ್ಲಾಘಿಸಿದ್ದಾರೆ.



